ನಿರ್ವಾತ ಜಾಡಿ
ಬಿಸಿಯಾಗಿರುವ ವಸ್ತುವನ್ನು ಬಿಸಿಯಾಗಿಯೂ ತಣ್ಣಗಿರುವ ವಸ್ತುವನ್ನು ತಣ್ಣಗೂ ಹೆಚ್ಚುಕಾಲದ ತನಕ ಇಟ್ಟಿರಲು ಬಳಸುವ ಸಲಕರಣೆ (ವ್ಯಾಕ್ಯೂಮ್ ಫ್ಲಾಸ್ಕ್). ಕಾಫಿ ಟೀ ಹಾಲು ಮುಂತಾದ ಪಾನೀಯ, ಮಂಜುಗಡ್ಡೆ ಮತ್ತಿತರ ಘನವಸ್ತು, ದ್ರವ ಅಮೋನಿಯ, ನೈಟ್ರೊಜನ್, ಆಕ್ಸಿಜನ್ ಮುಂತಾದ ಪದಾರ್ಥಗಳ ಉಷ್ಣತೆಯನ್ನು ಅಪೇಕ್ಷಿತ ಮಟ್ಟದಲ್ಲಿ ನಿಯತವಾಗಿಡಲು ಸಾಮಾನ್ಯವಾಗಿ ನಿರ್ವಾತ ಜಾಡಿಯನ್ನು ಬಳಸಲಾಗುವುದು. ಪಾನೀಯಗಳನ್ನು ಬಿಸಿಯಾಗಿ ಅಥವಾ ತಣ್ಣಗೆ ಇಡಲು ಥರ್ಮಾಸ್ ಫ್ಲಾಸ್ಕ್ (ಶಾಖಜಾಡಿ) ಎಂಬ ವಾಣಿಜ್ಯ ನಾಮವಿರುವ ನಿರ್ವಾತ ಜಾಡಿ ಬಳಕೆಯಲ್ಲಿದೆ.

ಚಿತ್ರ-1

	ವಹನ (ಕಂಡಕ್ಷನ್), ನಯನ (ಕನ್ವೆಕ್ಷನ್) ಮತ್ತು ವಿಕಿರಣ (ರೇಡಿಯೇಷನ್) ಎಂಬ ಮೂರು ಬಗೆಗಳಲ್ಲಿ ಉಷ್ಣ ಪ್ರಸಾರವಾಗುತ್ತದೆ. ಆದ್ದರಿಂದ ಯಾವುದೇ ವಸ್ತುವಿನ ಉಷ್ಣತೆಯನ್ನು ನಿಯತವಾಗಿ ಇಡಲು ಇವು ಮೂರೂ ಸಂಭವಿಸದಂತೆ ತಡೆಗಟ್ಟಬೇಕು. ವಸ್ತುವಿನ ಸುತ್ತ ಮಾಧ್ಯಮವನ್ನು ಇಲ್ಲದಂತೆ ಮಾಡುವುದರಿಂದ ನಯನವನ್ನೂ ಹೊಳಪು ಆವರಣವನ್ನು ಒದಗಿಸುವುದರಿಂದ ವಿಕಿರಣವನ್ನೂ ಉಷ್ಣಪಾರಕ ವಸ್ತುವನ್ನು ಬಳಸುವುದರಿಂದ ವಹನವನ್ನೂ ತಡೆಗಟ್ಟಬಹುದು. ಮಾಧ್ಯಮ ರಾಹಿತ್ಯವೇ ನಿರ್ವಾತ. ಇದೇ ತತ್ತ್ವವನ್ನು ಆಧರಿಸಿ ಜಾಡಿಯನ್ನು ರಚಿಸಿರುವುದರಿಂದ ನಿರ್ವಾತ ಜಾಡಿಯೆಂಬ ಹೆಸರು ಬಂದಿದೆ. ಮೇಲಿನ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ಸರ್ ಜೇಮ್ಸ್ ದೀವಾರ್ ಎಂಬಾತ ಮೊದಲಿಗೆ ದೀವಾರ್ ಜಾಡಿ (ದೀವಾರ್ ಫ್ಲಾಸ್ಕ್) ಎಂಬ ಉಪಕರಣವನ್ನು ರೂಪಿಸಿದ. ಅನಂತರ ಇದರ ಬಳಕೆ, ನಿತ್ಯ ಜೀವನದಲ್ಲಿ ಹೆಚ್ಚಾದ್ದರಿಂದ ಇದೇ ಮಾದರಿಯನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ, ಥರ್ಮಾಸ್ ಫ್ಲಾಸ್ಕ್ ಎಂಬ ವಾಣಿಜ್ಯನಾಮದಿಂದ ಬಳಕೆಗೆ ತರಲಾಯಿತು.

	ನಿರ್ವಾತ ಜಾಡಿಯ ಮುಖ್ಯ ಅಂಗವೆಂದರೆ ಎರಡು ತೆರಪುಗಳಿರುವ ಗಾಜಿನ ಒಂದು ಜಾಡಿ. ಉಪಯೋಗವನ್ನು ಅವಲಂಬಿಸಿ, ಇದರ ಆಕಾರ ಉಂಟು. ನಿತ್ಯ ಬಳಕೆಯಲ್ಲಿ ಇರುವ ಸಾಮಾನ್ಯ ಶಾಖಜಾಡಿಯ ರಚನೆ ಮತ್ತು ಕಾರ್ಯವನ್ನು ಇಲ್ಲಿ ಗಮನಿಸೋಣ. ಜಾಡಿಯ ಎರಡು ತೆರಪುಗಳ (ಚಿತ್ರ) ಅಂತರದಲ್ಲಿರುವ ವಾಯುವನ್ನು (ಮಾಧ್ಯಮವನ್ನು) ತೆಗೆದು ನಿರ್ವಾತ ಪ್ರದೇಶವನ್ನು ಉಂಟು ಮಾಡಿ, ಮತ್ತೆ ಆ ಪದರದ ಅಂತರಕ್ಕೆ ವಾಯು ನುಗ್ಗದಂತೆ ಮೊಹರುಮಾಡಲಾಗಿದೆ. ಹೀಗಾಗಿ ಜಾಡಿಯಿಂದ ಹೊರಕ್ಕೆ ಅಥವಾ ಜಾಡಿಯೊಳಕ್ಕೆ ನಯನ ವಿಧಾನದಿಂದ ಉಷ್ಣ ಪ್ರಸಾರವಾಗುವುದು ಬಹಳಷ್ಟು ಕಡಿಮೆ ಆಗುತ್ತದೆ. ಜಾಡಿಯ ಹೊರಪದರದ ಒಳಮೈಯನ್ನೂ ಒಳ ಪದರದ ಹೊರಮೈಯನ್ನೂ ಹೊಳಪು ವಸ್ತುವಿನಿಂದ ಲೇಪಿಸಿದೆ. ಕಿರ್ಖಾಫನ ನಿಯಮದ ಪ್ರಕಾರದ ಒಳ್ಳೆಯ ಉಷ್ಣ ಪ್ರಸಾರಕ ವಸ್ತುಗಳು ಒಳ್ಳೆಯ ಉಷ್ಣ ಹೀರಿಕೆ ವಸ್ತುಗಳೂ ಆಗಿರುತ್ತವೆ. ಅಥವಾ ಇದೇ ನಿಯಮವನ್ನು ಇನ್ನೊಂದು ರೂಪದಲ್ಲಿ ನಿರೂಪಿಸಿದರೆ, ಕಡಿಮೆ ಉಷ್ಣ ಪ್ರಸಾರಕ ಗುಣವಿರುವ ವಸ್ತುಗಳು ಕಡಿಮೆ ಉಷ್ಣಹೀರಿಕೆ ಗುಣವನ್ನು ಹೊಂದಿರುತ್ತವೆ ಎಂದಾಗುತ್ತದೆ. ಹೊಳಪುಮೇಲ್ಮೈ ಲೇಪನಕ್ಕೆ ಇಂಥದೇ ಗುಣ ಉಂಟು. ಅಂದರೆ ಅದು ಉಷ್ಣವನ್ನು ಪ್ರಸರಿಸುವುದೂ ಕಡಿಮೆ, ಹೀರಿಕೊಳ್ಳುವುದೂ ಕಡಿಮೆ. ಆದ್ದರಿಂದ ಜಾಡಿಯ ಪದರದ ಮೇಲಿನ ಹೊಳಪು ಲೇಪನದಿಂದ ವಿಕಿರಣ ಅತಿ ಕಡಿಮೆ ಆಗುತ್ತದೆ, ಅಥವಾ ಇಲ್ಲದಂತಾಗುತ್ತದೆ. ಜಾಡಿಯ ಬಾಯಿಯನ್ನು ಉಷ್ಣಾವಾಹಕ ವಸ್ತುವಿನ ಬಿರಡೆಯಿಂದ ಮುಚ್ಚಿದೆ. ಇದರ ಮೂಲಕ ಮತ್ತು ಎರಡು ಗಾಜಿನ ಪದರಗಳು ಸೇರಿರುವ ಜಾಗದಲ್ಲಿ ಉಷ್ಣ ವಹನ ವಿಧಾನದಿಂದ ಪ್ರಸಾರವಾಗುವ ಸಾಧ್ಯತೆ ಉಂಟು. ಆದರೆ ಹೀಗೆ ಪ್ರಸಾರವಾಗಿರುವ ಉಷ್ಣದ ಪರಿಮಾಣ ಬಲು ಕಡಿಮೆ. ಏಕೆಂದರೆ ಪ್ರಸಾರವಾಗುವ ದಾರಿ ಉದ್ದವಾಗಿದೆ ಮತ್ತು ಎರಡು ಪದರಗಳು ಕೂಡುವ ಜಾಗದ ಸಲೆ ಬಲು ಕಡಿಮೆಯಾಗಿದೆ. ಮೇಲಿನ ಎಲ್ಲ ಕ್ರಮಗಳಿಂದಾಗಿ ಜಾಡಿಯಿಂದ ಹೊರ ಪ್ರಸಾರವಾಗುವ ಮತ್ತು ಜಾಡಿಯೊಳಕ್ಕೆ ಹೋಗುವ ಉಷ್ಣ ವಹನ, ನಯನ ಮತ್ತು ವಿಕಿರಣ ವಿಧಾನಗಳಿಂದ ಪ್ರಸಾರವಾಗುವುದು ನಿಲ್ಲುತ್ತದೆ.											(ಸಿ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ